ಶನಿವಾರ, ನವೆಂಬರ್ 16, 2013

ಕೃತಕ ಉಪಗ್ರಹದಲ್ಲಿ ಸಂವೇದಕಗಳು

ಕನ್ನಡ ವಿಜ್ಞಾನ ಸಾಹಿತ್ಯದಲ್ಲಿ ಮೂಡಿಬಂದಿರುವ ನನ್ನ ಮೊದಲ ಪುಸ್ತಕ.
 
ಕನ್ನಡ ಮಾಧ್ಯಮದ ಪ್ರಾಥಮಿಕ ಹಾಗೂ ಮಾಧ್ಯಮಿಕ ತರಗತಿಗಳಲ್ಲಿ ಓದುತ್ತಿರುವ ಬಾಲವಿಜ್ಞಾನಿಗಳು ಹಾಗೂ ಬಾಹ್ಯಾಕಾಶದ ವಿಷಯಗಳಲ್ಲಿ ಆಸಕ್ತಿ ಇರುವವರಿಗೆ ಮಾಹಿತಿ ನೀಡುವ ಪುಸ್ತಕ.
 
ಉಪಗ್ರಹಗಳು ನಮ್ಮ ದಿನ ನಿತ್ಯದ ಜೀವನದಲ್ಲಿ ನಮಗೆ ಗೊತ್ತಿಲ್ಲದಂತೆ ಪ್ರವೇಶ ಪಡೆದಿವೆ. ಅವುಗಳು ನೀಡುವ ಅನೇಕ ಮಾಹಿತಿಗಳು ವಿವಿಧ ಉದ್ದೇಶಗಳಿಗೆ ಬಳಕೆಯಾಗುತ್ತಿವೆ. ದೂರಸಂಪರ್ಕ, ದೂರದರ್ಶನ, ಹವಾಮಾನದ ಸ್ಥಿತಿ-ಗತಿ, ಸಮುದ್ರದಲ್ಲಿರುವ ಜಲಚರಗಳ ಮಾಹಿತಿ, ಭೂ ಸಂಪನ್ಮೂಲಗಳ ಮಾಹಿತಿ.... ಒಂದೇ, ಎರಡೇ....ಇವೆಲ್ಲವುಗಳು ಉಪಗ್ರಹಗಳ ಮೂಲಕ ನಮ್ಮನ್ನು ತಲುಪುತ್ತವೆ. ಈ ಎಲ್ಲ ಮಾಹಿತಿಗಳನ್ನು ಪಡೆಯಲು ಉಪಗ್ರಹಗಳು ವಿವಿಧ ಕಕ್ಷೆಗಳಲ್ಲಿ ಸುತ್ತುತ್ತಿರಬೇಕು, ಪೂರ್ವ ನಿರ್ಧಾರಿತವಾದಷ್ಟು ವಾಲಿರಬೇಕು, ಭೂಮಿಯನ್ನು ಸದಾಕಾಲ ನೋಡುತ್ತಿರಬೇಕು. ಇಷ್ಟೆಲ್ಲಾ ಇದ್ದಾಗ ಮಾತ್ರ ನಿಖರವಾದ ಮಾಹಿತಿಗಳು ನಮಗೆ ಸಿಗುತ್ತವೆ. ಸ್ವಲ್ಪ ಆ ಕಡೆ-ಈ ಕಡೆ ಕದಲಿದರೂ ನಮಗೆ ತಲುಪಬೇಕಾದ ಮಾಹಿತಿ ತಲುಪದು!
 
ಹಾಗಾದರೆ ಬಾಹ್ಯಾಕಾಶದ ನಿರ್ವಾತದಲ್ಲಿ ಯಾವುದೇ ಲಂಗು-ಲಗಾಮಿಲ್ಲದೆ ಉಪಗ್ರಹಗಳು ನಿರ್ದಿಷ್ಟ ಸ್ಥಾನ-ಸ್ಥಿತಿಯಲ್ಲಿ ಹೇಗಿರುತ್ತವೆ? ಹೌದು... ಈ ಕೆಲಸಕ್ಕಾಗಿ ಅವುಗಳಲ್ಲಿ ‘ಕಿವಿ-ಕಣ್ಣು’ಗಳನ್ನು ಅಳವಡಿಸಿರುತ್ತಾರೆ! ಉಪಗ್ರಹದಲ್ಲಿ ಅಳವಡಿಸುವ ಸಂವೇದಕಗಳೇ ಅವುಗಳ ಕಣ್ಣುಗಳು, ಕಿವಿಗಳು!! ಈ ಹೊತ್ತಿಗೆಯಲ್ಲಿ ಉಪಗ್ರಹದಲ್ಲಿ ಅಳವಡಿಸಿರುವ ಸಂವೇದಕಗಳ ಬಗ್ಗೆ ಮಾಹಿತಿಯನ್ನು ಕಿರಿಯರು ಅರ್ಥೈಸಿಕೊಳ್ಳುವ ರೀತಿಯಲ್ಲಿ ಸರಳವಾಗಿ ಪೋಣಿಸಲಾಗಿದೆ.

ಸಂವೇದನೆ ಎಂದರೇನು? ಪಂಚೇಂದ್ರಿಯಗಳ ಮೂಲಕ ನಾವು ಯಾವ ಯಾವ ಸಂವೇದನೆಗಳನ್ನು ಪಡೆಯುತ್ತೇವೆ ಎಂಬ ವಿವರಣೆಗಳೊಂದಿಗೆ ಆರಂಭವಾಗುವ ಈ ಪುಸ್ತಕ, ಮುಂದಿನ ಪುಟಗಳಲ್ಲಿ ನಮ್ಮ ದೈನಂದಿನ ಜೀವನದಲ್ಲಿ ಕಾಣಬರುವ ಹಲವು ಸಂವೇದಕಗಳನ್ನು ಪರಿಚಯಿಸುತ್ತದೆ. ಈ ಸರಳ ತತ್ವಗಳನ್ನು ಕೃತಕ ಉಪಗ್ರಹವೊಂದರ ಕಾರ್ಯನಿರ್ವಹಣೆಗೆ ಏಕೆ ಮತ್ತು ಹೇಗೆ ಬಳಸಬೇಕಾಗುತ್ತದೆ ಎಂಬುದರ ವಿವರಣೆಗಳು ನಂತರದಲ್ಲಿವೆ.